ಚಂದ್ರಶೇಖರ ಆಝಾದ

ಜನ್ಮ : ೨೩ ಜುಲೈ ೧೯೦೬, ಭಾಬರಾ
ಶೌರ್ಯಶಾಲಿ ಆತ್ಮ ಸಮರ್ಪಣೆ : ೨೭ ಫೆಬ್ರವರಿ ೧೯೩೧, ಅಲಹಾಬಾದ

ಚಂದ್ರಶೇಖರ ಆಝಾದರ ಜನ್ಮ ಮಧ್ಯಭಾರತದ ಝಾಬುಆ ತಹಶೀಲಿನ ಭಾಬರಾ ಎಂಬ ಹಳ್ಳಿಯಲ್ಲಿ ಆಯಿತು. ಅವರ ತಂದೆಯ ಹೆಸರು ಪಂಡಿತ ಸೀತಾರಾಮ ತಿವಾರಿ, ತಾಯಿಯ ಹೆಸರು ಜಗದಾನಿ ದೇವಿ. ತನ್ನ ೧೪ನೇ ವಯಸ್ಸಿನಲ್ಲಿ ಬನಾರಸಿನಲ್ಲಿ ಸಂಸ್ಕೃತ ಅಧ್ಯಯನ ಮಾಡುತ್ತಿರುವಾಗ ಚಂದ್ರಶೇಖರ ಕಾನೂನುಭಂಗ ಚಳುವಳಿಯಲ್ಲಿ ಭಾಗವಹಿಸಿದರು. ಅವರು ಎಷ್ಟು ಚಿಕ್ಕವರಾಗಿದ್ದರೆಂದರೆ, ಅವರನ್ನು ಹಿಡಿದಾಗ ಅವರ ಕೈಗಳಿಗೆ ಕೋಳ ಹಾಕಲು ಆಗುತ್ತಿರಲಿಲ್ಲ. ಬ್ರಿಟಿಷ್ ನ್ಯಾಯಾಲಯ ಈ ಬಾಲಕನಿಗೆ ೧೨ ಛಡಿಯೇಟಿನ ಅಮಾನವೀಯ ಶಿಕ್ಷೆ ನೀಡಿತು. ಛಡಿಯೇಟಿನಿಂದ ಆಝಾದರ ಮನಸ್ಸಿನ ಕ್ಷೋಭೆ ಇನ್ನೂ ಹೆಚ್ಚಾಯಿತು. ಅವರಲ್ಲಿ ಅಹಿಂಸೆಯ ಮೇಲಿದ್ದ ವಿಶ್ವಾಸ ಹಾರಿಹೋಯಿತು. ಅವರು ಮನಸ್ಸಿನಿಂದ ಕ್ರಾಂತಿಕಾರಿಯಾದರು. ಕಾಶಿಯಲ್ಲಿ ಶ್ರೀಪ್ರವಣೇಶ ಮುಖರ್ಜಿ ಇವರಿಗೆ ಕ್ರಾಂತಿಯ ದೀಕ್ಷೆ ನೀಡಿದರು. ೧೯೨೧ ರಿಂದ ೧೯೩೨ ರ ತನಕ ಕ್ರಾಂತಿಕಾರಿ ಪಕ್ಷವು ಆಯೋಜಿಸಿದ ಪ್ರತಿಯೊಂದು ಚಳುವಳಿ, ಪ್ರಯೋಗ, ಯೋಜನೆ ಇತ್ಯಾದಿಗಳಲ್ಲಿ ಚಂದ್ರಶೇಖರ ಮುಂಚೂಣಿಯಲ್ಲಿದ್ದರು.

ಸೌಂಡರ್ಸ್.ನನ್ನು ಬಲಿ ತೆಗೆದುಕೊಂಡ ನಂತರ ಚಂದ್ರಶೇಖರ ಆಝಾದರು ಪರಾರಿಯಾದರು. ವೇಷ ಬದಲಾಯಿಸಿಕೊಂಡು ಭೂಗತ ಸ್ಥಿತಿಯಲ್ಲಿ ಉದಾಸೀ ಮಹಂತರ ಶಿಷ್ಯರಾಗಿದ್ದರು. ಏಕೆಂದರೆ ಈ ಮಹಂತರಲ್ಲಿ ಬಹಳಷ್ಟು ಸಂಪತ್ತು ಇತ್ತು. ಆ ಸಂಪತ್ತು ಆಝಾದರಿಗೇ ದೊರೆಯಲಿಕಿತ್ತು, ಆದರೆ ಆಝಾದರಿಗೆ ಆ ಮಠದಲ್ಲಿನ ಇಚ್ಛಾನುಸಾರ ವರ್ತನೆ ಇಷ್ಟವಾಗಲಿಲ್ಲವೆಂದು ಅವರು ಅದರ ಮೋಹವನ್ನು ಬಿಟ್ಟರು. ಮುಂದೆ ಅವರು ಝಾನ್ಸಿಯಲ್ಲಿ ವಾಸಮಾಡಿದರು. ಅಲ್ಲಿ ವಾಹನ ನಡೆಸುವುದು ಹಾಗೂ ಪಿಸ್ತೂಲಿನಿಂದ ಗುಂಡು ಹಾರಿಸುವುದು, ಗುರಿಸಾಧಿಸುವುದು ಇತ್ಯಾದಿ ಶಿಕ್ಷಣ ಪಡೆದುಕೊಂಡರು. ಕಾಕೋರಿ ಒಳಸಂಚಿನಿಂದ ಅವರ ತಲೆಯ ಮೇಲೆ ನೇಣುಕಂಬದ ಕತ್ತಿ ನೇತಾಡುತ್ತಿತ್ತು. ಆದರೂ ಅವರು ಮೊಕದ್ದಮೆಯಲ್ಲಿನ ಕ್ರಾಂತಿಕಾರರನ್ನು ಬಿಡಿಸುವ ಯೋಜನೆಯಲ್ಲಿ ಮಗ್ನರಾಗಿದ್ದರು. ಹೊರಗಿಂದ ನೋಡುವವರಿಗೆ ಅವರು ಕ್ರಾಂತಿಕಾರ್ಯವನ್ನು ಬಿಟ್ಟಿದ್ದಾರೆಂದು ಅನಿಸುತ್ತಿತ್ತು.

ಗಾಂಧಿ ಆಯರ್ವೀನ್ ಕರಾರು ಆಗುತ್ತಿರುವಾಗ ಅವರು ಗಾಂಧಿಗೆ ‘ನಿಮ್ಮ ಪ್ರಭಾವದಿಂದ ಭಗತಸಿಂಗ್ ಮುಂತಾದವರನ್ನು ಮುಕ್ತಗೊಳಿಸಬೇಕು’, ಎಂದು ಸಂದೇಶ ಕಳುಹಿಸಿದರು. ಹಾಗೆ ಮಾಡಿದರೆ ಹಿಂದೂಸ್ಥಾನದ ರಾಜಕಾರಣಕ್ಕೆ ಬೇರೆಯೇ ತಿರುವು ಬರುವುದು, ಆದರೆ ಗಾಂಧಿಯವರು ಆ ಸಂದೇಶವನ್ನು ತಿರಸ್ಕರಿಸಿದರು. ಆದರೂ ಆಝಾದರು ಕ್ರಾಂತಿಕಾರರನ್ನು ಬಿಡಿಸುವ ಸಲುವಾಗಿ ಬಿರುಸಿನ ಪ್ರಯತ್ನವನ್ನು ಮುಂದುವರಿಸಿದರು. ‘ನನ್ನಲ್ಲಿ ಉಸಿರಿರುವಷ್ಟು ಸಮಯ ನಾನು ಬ್ರಿಟಿಷರ ಕೈಗೆ ಜೀವಂತವಾಗಿ ಸಿಗುವುದಿಲ್ಲ.’, ಎಂಬುದು ಆಝಾದರ ಪ್ರತಿಜ್ಞೆಯಾಗಿತ್ತು. ಕೊನೆಗೆ ೨೭ ಫೆಬ್ರವರಿ ೧೯೩೧ ರಂದು ಅವರು ಅಲಹಾಬಾದದ ಆಲ್‌ಫ್ರೆಡ್ ಪಾರ್ಕಿನೊಳಗೆ ನುಸುಳಿದರು. ನಾಟ್ ಬೋವರ್ ಎಂಬ ಬ್ರಿಟಿಷ್ ಅಧಿಕಾರಿ ಅಲ್ಲಿಗೆ ಬಂದು ತಕ್ಷಣ ಆಝಾದರ ಮೇಲೆ ಗುಂಡು ಹಾರಿಸಿದನು. ಅದು ಅವರ ತೊಡೆಗೆ ತಗುಲಿತು. ಅವರು ತಕ್ಷಣ ನಾಟ್ ಬೋವರ್.ಗೆ ಗುಂಡು ಹಾರಿಸಿ ಅವನ ಕೈಯನ್ನೇ ನಿಷ್ಕ್ರಿಯಗೊಳಿಸಿದರು. ಆ ಮೇಲೆ ಅವರು ಹರಿದಾಡುತ್ತಾ ಒಂದು ನೇರಳೆ ಮರದ ಹಿಂದೆ ಹೋದರು. ಅವರು ಹಿಂದೀ ಜವಾನರಿಗೆ ಕಿರುಚಿ ಹೇಳಿದರು,’ ‘ಅರೆ ಸಿಪಾಯಿ ಭಾಯಿಯೋ, ತುಮ್‌ಲೋಗ್ ಮೇರೆ ಊಪರ್ ಗೋಲಿಯಾಂ ಕ್ಯೌಂ ಬರಸಾ ರಹೆ ಹೋ? ಮೈ ತೋ ತುಮ್ಹಾರಿ ಆಜಾದಿ ಕೆ ಲಿಯೆ ಲಢ್ ರಹಾ ಹೂಂ ! ಕುಛ್ ಸಮಝೊ ತೋ ಸಹೀ !’ (ನೀವು ನನ್ನ ಮೇಲೆ ಏಕೆ ಗುಂಡು ಹಾರಿಸುತ್ತಿದ್ದೀರಿ ? ನಾನು ನಿಮ್ಮ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದೇನೆ ) ಉಳಿದವರಿಗೆ ಅವರು ಹೇಳಿದರು’, ಇದರ್ ಮತ್ ಆವೋ ! ಗೋಲಿಂಯಾ ಚಲ್ ರಹೀ ಹೈ ! ಮಾರೆಜಾವೋಗೆ ! ವಂದೇ ಮಾತರಂ ! ವಂದೇ ಮಾತರಂ !’ (ಇಲ್ಲಿಗೆ ಬರಬೇಡಿ, ಗುಂಡು ಹಾರಾಟ ನಡೆದಿದೆ, ಸಾಯುವಿರಿ, ವಂದೇ ಮಾತರಂ, ವಂದೇ ಮಾತರಂ )

ತನ್ನ ಪಿಸ್ತೂಲಿನಲ್ಲಿ ಕೊನೆಯ ಗುಂಡು ಇರುವಾಗ ಅವರು ಅದನ್ನು ತನ್ನ ಹಣೆಯ ಮೇಲಿಟ್ಟು ಗುಂಡು ಹಾರಿಸಿಬಿಟ್ಟರು ! ಅದೇ ಕ್ಷಣದಲ್ಲಿ ಅವರ ಪ್ರಾಣ ತಮ್ಮ ನಶ್ವರ ದೇಹವನ್ನು ತೊರೆದು ಪಂಚತತ್ತ್ವದಲ್ಲಿ ವಿಲೀನವಾಯಿತು.

ನಾಟ್ ಬೋವರ್ ‘ಇಂತಹ ಗುರಿಯಿಡುವವರನ್ನು ನಾನು ಎಲ್ಲಿಯೂ ನೋಡಿಲ್ಲ’, ಎಂದು ಉದ್ಗರಿಸಿದನು !’ ಆರಕ್ಷಕರು ಅವರ ಪ್ರಾಣವಿಲ್ಲದ ದೇಹದೊಳಗೆ ಬಂದೂಕಿನ ಕತ್ತಿ ಚುಚ್ಚಿ ಅವರು ಸತ್ತಿದ್ದಾರೆಂದು ಖಾತ್ರಿಪಡಿಸಿಕೊಂಡರು. ಸರಕಾರ ಅವರ ಮೃತದೇಹವನ್ನು ಆಲ್ಫ್ರೆಡ್ ಪಾರ್ಕಿನಲ್ಲಿ 'ಒಬ್ಬ ದರೋಡೆಕೋರ ಹತ್ಯೆಗೀಡಾದನು' ಎಂದು ಅಪಪ್ರಚಾರ ಮಾಡುತ್ತಾ ಹಾಗೆಯೇ ಸುಟ್ಟು ಹಾಕುವ ಪ್ರಯತ್ನಮಾಡಿತು. ಆದರೆ ಪಂಡಿತ ಮಾಳವೀಯರು, ಸೌ. ಕಮಲಾ ನೆಹರು ಇವರು ಅದನ್ನು ತಡೆದು ಅವರ ಅರ್ಧ ಸುಟ್ಟಿರುವ ಚಿತೆಯನ್ನು ನಂದಿಸಿ ಪುನಃ ಹಿಂದೂ ಪರಂಪರೆಗನುಸಾರ ಅವರ ಅಂತ್ಯವಿಧಿಯನ್ನು ಮಾಡಿದರು. ಫೆಬ್ರವರಿ ೨೮ ರಂದು ಪ್ರಚಂಡವಾದ ಅಂತ್ಯಯಾತ್ರೆಯನ್ನು ನಡೆಸಿ ಎಲ್ಲ ಮುಖಂಡರು ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

Leave a Comment