ವಸ್ತುಗಳನ್ನು ಅರ್ಪಿಸುವಾಗ ಅದರ ಬೆಲೆಗಿಂತಲೂ ಆ ಸಮಯದಲ್ಲಿ ಇರುವ ಭಾವ ಮಹತ್ವದ್ದು! – ಗುರು ಗೋವಿಂದ ಸಿಂಗ್

೧.ರಾಜಾ ರಘುನಾಥಸಿಂಹನು ಗುರು ಗೋವಿಂದಸಿಂಗ್.ರ ಚರಣಗಳಲ್ಲಿ ರತ್ನಜಡಿತ ಚಿನ್ನದ ಕಂಕಣವನ್ನು ಅರ್ಪಿಸುವುದು

ಯಮುನೆಯ ಪವಿತ್ರ ತೀರದಲ್ಲಿ ಸಿಖ್ಖರ ಹತ್ತನೆಯ ಹಾಗೂ ಕೊನೆಯ ಗುರು ಗೋವಿಂದಸಿಂಹರು ತಮ್ಮ ಅಮೃತವಚನಗಳಿಂದ ಶ್ರೋತೃಗಳ ಹೃದಯವನ್ನು ಉಲ್ಲಸಿತಗೊಳಿಸುತ್ತಿದ್ದರು. ಸತ್ಸಂಗದ ನಂತರ ಶ್ತೋತೃಗಳು ಒಬ್ಬೊಬ್ಬರಾಗಿ ಬಂದು ಗುರುಚರಣಗಳಲ್ಲಿ ಕಾಣಿಕೆಯನ್ನು ಇಡುತ್ತಿದ್ದರು. ಈ ಸತ್ಸಂಗಕ್ಕೆ ರಾಜಾ ರಘುನಾಥಸಿಂಹನೂ ಬಂದಿದ್ದನು. ಅವನು ಗುರುಚರಣದಲ್ಲಿ ರತ್ನಜಡಿತ ಚಿನ್ನದ ಕಂಕಣಗಳನ್ನು ಅರ್ಪಿಸಿದನು.

೨. ಕಂಕಣವನ್ನು ತೊಳೆಯುತ್ತಿರುವಾಗ ಅದು ನೀರಿನಲ್ಲಿ ಬೀಳುವುದು ಹಾಗೂ ರಾಜನು ದುಃಖ ವ್ಯಕ್ತಪಡಿಸುವುದು

ಗುರು ಗೋವಿಂದಸಿಂಗ್.ರು ಆ ಕಂಕಣಗಳನ್ನು ನೋಡುತ್ತ ರಾಜನಿಗೆ ’ರಘುನಾಥಸಿಂಹರೇ, ಸೂರ್ಯನ ಪ್ರಕಾಶದಲ್ಲಿ ಈ ಕಂಕಣಗಳು ಎಷ್ಟು ಹೊಳೆಯುತ್ತಿವೆ. ಇವುಗಳನ್ನು ನೀರಿನಿಂದ ತೊಳೆದರೆ ಇವುಗಳ ಹೊಳಪು ಇನ್ನಷ್ಟು ಹೆಚ್ಚಾಗುವುದು ಎಂದು ಅನಿಸುತ್ತದೆ’ ಎಂದು ಹೇಳಿದರು. ಅನಂತರ ಗುರು ಗೋವಿಂದಸಿಂಗ್ ಆಸನದಿಂದ ಎದ್ದು ಯಮುನಾ ನದಿಯಲ್ಲಿ ಒಂದು ಕಂಕಣವನ್ನು ತೊಳೆಯತೊಡಗಿದರು. ಆಗ ಆ ಕಂಕಣವು ನೀರಿನಲ್ಲಿ ಬಿದ್ದಿತು.
ರಘುನಾಥಸಿಂಹನ ಬಾಯಿಂದ ಒಮ್ಮೆಲೆ ’ಅರೆರೆ ! ಇಷ್ಟೊಂದು ಅಮೂಲ್ಯ ಕಂಕಣವು ನಿಮ್ಮ ಕೈಯಿಂದ ಬಿದ್ದಿತು ! ಅಕ್ಕಸಾಲಿಗನು ಅದೆಷ್ಟು ಕಷ್ಟಪಟ್ಟು ತಯಾರಿಸಿದ್ದನು. ಅದಕ್ಕಾಗಿ ಸಾಕಷ್ಟು ಹಣವೂ ಖರ್ಚಾಗಿತ್ತು’ ಎಂಬ ವಾಕ್ಯವು ಹೊರಬಿತ್ತು. ರಾಜಾ ರಘುನಾಥಸಿಂಹನು ಕಂಕಣವನ್ನು ಹುಡುಕಲು ಯಮುನಾ ನದಿಯಲ್ಲಿ ಇಳಿದನು. ಸಾಕಷ್ಟು ಪ್ರಯತ್ನಿಸಿದ ನಂತರವೂ ಕಂಕಣವು ಸಿಗಲಿಲ್ಲ. ಆಗ ರಾಜನು ಹೊರಬಂದು ಗುರು ಗೋವಿಂದಸಿಂಗ್.ಗೆ ’ದಯವಿಟ್ಟು, ಕಂಕಣವು ಎಲ್ಲಿ ಬಿದ್ದಿತು ಎಂದು ನೀವು ಹೇಳಬಹುದೇ ?’ ಎಂದು ಕೇಳಿದನು.

೩. ಗುರು ಗೋವಿಂದಸಿಂಹರು ಯಮುನೆಯಲ್ಲಿ ಇನ್ನೊಂದು ಕಂಕಣವನ್ನೂ ಎಸೆಯುವುದು

ರಾಜಾ ರಘುನಾಥಸಿಂಹನು ಕಾಣಿಕೆಯನ್ನು ಇಡಲು ಬಂದಿರುವಾಗಲೇ, ಗೋವಿಂದಸಿಂಗ್.ಗೆ ರಘುನಾಥಸಿಂಹನು ತನ್ನ ಧನ-ವೈಭವದ ಪ್ರದರ್ಶನಕ್ಕಾಗಿಯೇ ಕಂಕಣವನ್ನು ತೆಗೆದುಕೊಂಡು ಬಂದಿದ್ದಾನೆ ಎಂಬುದು ತಿಳಿದಿತ್ತು. ಕೈಯಲ್ಲಿರುವ ಇನ್ನೊಂದು ಕಂಕಣವನ್ನೂ ಯಮುನೆಯಲ್ಲಿ ಎಸೆಯುತ್ತ ಅವರು ’ಎಲ್ಲಿ ಈ ಕಂಕಣ ಬೀಳುವುದೋ ಅಲ್ಲಿಯೇ ಮೊದಲಿನ ಕಂಕಣವು ಬಿದ್ದಿದೆ’ ಎಂದು ಹೇಳಿದರು. ಆಗ ರಘುನಾಥಸಿಂಹನ ಅಭಿಮಾನವು ಕಡಿಮೆಯಾಯಿತು ಹಾಗೂ ಅವನು ಏನನ್ನೂ ಹೇಳದೇ ಆಸನದಲ್ಲಿ ಕುಳಿತುಕೊಂಡನು.

೪. ವೃದ್ಧೆಯು ಪ್ರೀತಿಯಿಂದ ತಂದ ಹಾಲು ಹಾಗೂ ಹಣ್ಣುಗಳನ್ನು ಸ್ವೀಕರಿಸುವುದು

ಗುರು ಗೋವಿಂದಸಿಂಗ್ ನಡೆಯುತ್ತ ಶ್ರೋತೃಗಳ ಕೊನೆಯ ಸಾಲಿನಲ್ಲಿ ಬಂದು ಒಬ್ಬ ವೃದ್ಧೆಯ ಬಳಿ ಹೋಗಿ ’ಅಮ್ಮ, ನೀನು ನನಗಾಗಿ ಏನು ತಂದಿರುವೆ ?’ ಎಂದು ಕೇಳಿದರು. ಒಂದು ಕ್ಷಣ ಆ ಅಜ್ಜಿಗೆ ಪ್ರತ್ಯಕ್ಷ ಗುರುಗಳು ನನ್ನ ಬಳಿ ಬಂದಿದ್ದಾರೆ ಎಂಬ ಬಗ್ಗೆ ವಿಶ್ವಾಸವಾಗಲಿಲ್ಲ. ಗೋವಿಂದಸಿಂಗ್ ಪುನಃ ’ಅಮ್ಮ, ನೀವು ನನಗಾಗಿ ತಂದಿರುವ ವಸ್ತುವನ್ನು ತೆಗೆದುಕೊಳ್ಳಲು ನನಗೆ ಆನಂದವಾಗುತ್ತದೆ.’ ಎಂದು ಹೇಳಿದರು. ಅಗ ಅಜ್ಜಿಯು ಬಹಳ ಸಂಕೋಚದಿಂದ ’ನಾನು ತಂದಿರುವ ವಸ್ತು ಅತ್ಯಂತ ತುಚ್ಛವಾಗಿದೆ. ಇಂದು ಮನೆಯಿಂದ ಹೊರಡುವಾಗ ’ನೀವು ನಮಗಾಗಿ ಸತ್ಸಂಗ ತೆಗೆದುಕೊಳ್ಳುತ್ತೀರಿ. ಮಾತನಾಡುವುದರಿಂದ ನಿಮ್ಮ ಗಂಟಲು ಒಣಗಿ ತೊಂದರೆಯಾಗುತ್ತದೆ, ಸತ್ಸಂಗದ ಮೊದಲು ಸ್ವಲ್ಪ ಹಾಲು ಕುಡಿದರೆ ನಿಮಗೆ ಆರಾಮವೆನಿಸುತ್ತದೆ.’ ಎಂಬ ವಿಚಾರದಿಂದ ನಾನು ಸ್ವಲ್ಪ ಆಕಳ ಹಾಲಿನಲ್ಲಿ ಕಲ್ಲುಸಕ್ಕರೆಯನ್ನು ಬೆರೆಸಿ ತಂದಿದ್ದೇನೆ ಹಾಗೂ ಸ್ವಲ್ಪ ಹಣ್ಣುಗಳನ್ನೂ ತಂದಿದ್ದೇನೆ. ನಿಮ್ಮ ಸತ್ಸಂಗ ಆರಂಭವಾಗುವ ಮುನ್ನವೇ ನಿಮ್ಮ ಚರಣದಲ್ಲಿ ಈ ಅಲ್ಪಕಾಣಿಕೆಯನ್ನು ಅರ್ಪಿಸಬೇಕೆಂಬ ಇಚ್ಛೆಯಿತ್ತು; ಆದರೆ ನಿಮ್ಮ ಚರಣದಲ್ಲಿ ಬೆಲೆಬಾಳುವ ಕಾಣಿಕೆಗಳು ಬರುತ್ತಿರುವುದರಿಂದ, ಅದರಲ್ಲೂ ಚಿನ್ನದ ಕಂಕಣಗಳು ಅರ್ಪಣೆಯಾಗಿರುವುದನ್ನು ಕಂಡು ನನಗೆ ಈ ಕಾಣಿಕೆ ಬಹಳ ಸಾಮಾನ್ಯವೆನಿಸಿತು.’ ಎಂದು ಹೇಳಿದಳು. ಗುರು ಗೋವಿಂದಸಿಂಗ್ ಅಜ್ಜಿಯ ಕಡೆಗೆ ಸ್ನೇಹದಿಂದ ನೋಡುತ್ತ ’ನನ್ನ ಎದುರು ಅಮೂಲ್ಯ ವಸ್ತುಗಳ ರಾಶಿ ಬಿದ್ದಿದೆ, ಅದರಲ್ಲಿ ಚಿನ್ನ-ಬೆಳ್ಳಿಯ ಅಲಂಕಾರಗಳು ಅವಶ್ಯವಾಗಿ ಇರಬಹುದು; ಆದರೆ ಅಮ್ಮ, ಆ ವಸ್ತುಗಳಲ್ಲಿ ನೀವು ತಂದಿರುವ ಹಾಲಿನಲ್ಲಿರುವ ಪ್ರೀತಿಯಿಲ್ಲ!’ ಎಂದು ಹೇಳಿದರು. ಇಷ್ಟು ಹೇಳಿ ಗೋವಿಂದಸಿಂಗ್.ರು ಆ ಅಜ್ಜಿಯ ಕೈಯಲ್ಲಿದ್ದ ಹಾಲಿನ ಲೋಟವನ್ನು ತೆಗೆದುಕೊಂಡು ಹಾಲನ್ನು ಕುಡಿಯತೊಡಗಿದರು. ಅನಂತರ ಹಣ್ಣಿನ ಬುಟ್ಟಿಯನ್ನೂ ತೆಗೆದುಕೊಂಡರು. ಗುರುಗಳು ತಾನು ಅರ್ಪಿಸಿದ ಕಾಣಿಕೆಯನ್ನು ಸ್ವೀಕರಿಸಿದ್ದನ್ನು ನೋಡಿ ಅಜ್ಜಿಯ ಕಣ್ಣುಗಳು ಆನಂದಭಾಷ್ಪಗಳಿಂದ ತುಂಬಿದವು.

೫. ಕಾಣಿಕೆಯ ಮಹತ್ವವು ಆ ವಸ್ತುವಿನ ಬೆಲೆಯಿಂದ ನಿಶ್ಚಿತವಾಗುವುದಿಲ್ಲ ಬದಲಾಗಿ ಅದನ್ನು ಕೊಡುವುದರ ಹಿಂದಿನ ಭಾವದಿಂದ ನಿಶ್ಚಿತವಾಗುತ್ತದೆ

ಗುರು ಗೋವಿಂದಸಿಂಹರು ಪುನಃ ತಮ್ಮ ಆಸನದಲ್ಲಿ ಹೋಗಿ ಕುಳಿತು ’ಕಾಣಿಕೆಯ ಮಹತ್ವವು ಆ ವಸ್ತುವಿನ ಬೆಲೆಯಿಂದ ನಿಶ್ಚಿತವಾಗುವುದಿಲ್ಲ ಬದಲಾಗಿ ಅದನ್ನು ಕೊಡುವುದರ ಹಿಂದಿನ ಭಾವದಿಂದ ನಿಶ್ಚಿತವಾಗುತ್ತದೆ. ಇಂದು ಈ ಹಾಲು ಕುಡಿದು ನನಗಾದ ಆನಂದದ ಎದುರು ಸ್ವರ್ಗ ಸುಖವೂ ತೃಣಸಮಾನವಾಗಿದೆ. ಅದರಲ್ಲಿ ತಾಯಿಯ ವಾತ್ಸಲ್ಯವಿತ್ತು. ಅಮ್ಮ, ನಿಮ್ಮಂತಹ ಭಕ್ತರೇ ಧರ್ಮದ ಗೌರವವಾಗಿದ್ದಾರೆ. ನೀವು ನನ್ನನ್ನು ಗುರುಸ್ಥಾನದಲ್ಲಿ ಆದರಿಸುತ್ತಿದ್ದರೂ ನನಗೆ ನೀವು ಪೂಜ್ಯರಾಗಿದ್ದೀರಿ’ ಎಂದು ಹೇಳಿದರು.

ಆಧಾರ : ಋಷೀ ಪ್ರಸಾದ, ಡಿಸೆಂಬರ ೨೦೦೩

Leave a Comment