ಶಿವನ ಆರತಿ

ಲವಥವತೀ ವಿಕ್ರಾಳಾ ಬ್ರಹ್ಮಾಂಡೀ ಮಾಳಾ|
ವಿಷೆ ಕಂಠ ಕಾಳಾ ತ್ರಿನೇತ್ರೀ ಜ್ವಾಳಾ|
ಲಾವಣ್ಯಸುಂದರ ಮಸ್ತಕೀ ಬಾಳಾ|
ತೇಥುನಿಯಾ ಜಳ ನಿರ್ಮಳ ವಾಹೇ ಝುಳಝುಳಾ||೧||

ಜಯ ದೇವ ಜಯ ದೇವ ಜಯ ಶ್ರೀ ಶಂಕರಾ|
ಆರತೀ ಓವಾಳೂ ತುಜ ಕರ್ಪುರಗೌರಾ||….||

ಕರ್ಪುರಗೌರಾ ಭೋಳಾ ನಯನೀ ವಿಶಾಳಾ|
ಅರ್ಧಾಂಗೀ ಪಾರ್ವತೀ ಸುಮನಾಂಚ್ಯಾ ಮಾಳಾ|
ವಿಭೂತೀಚೇ ಉಧಳಣ ಶಿತಿಕಂಠ ನಿಳಾ|
ಐಸಾ ಶಂಕರ ಶೋಭೇ ಉಮಾವೇಲ್ಹಾಳಾ||೨||

ದೇವೀಂ ದೈತ್ಯೀಂ ಸಾಗರಮಂಥನ ಪೈ ಕೇಲೇ|
ತ್ಯಾಮಾಜೀ ಅವಚಿತ ಹಾಲಾಹಲ ಜೇ ಉಠಲೇ|
ತೇ ತ್ವಾ ಅಸುರಪಣೇ ಪ್ರಾಶನ ಕೇಲೇ|
ನೀಲಕಂಠ ನಾಮ ಪ್ರಸಿದ್ಧ ಝಾಲೇ||೩||

ವ್ಯಾಘ್ರಾಂಬರ ಫಣಿವರಧರ ಸುಂದರ ಮದನಾರೀ|
ಪಂಚಾನನ ಮನಮೋಹನ ಮುನಿಜನಸುಖಕಾರೀ|
ಶತಕೋಟೀಚೇ ಬೀಜ ವಾಚೇ ಉಚ್ಚಾರೀ|
ರಘುಕುಳಾಟಿಳಕ ರಾಮದಾಸಾ ಅಂತರೀ ||೪||
– ಸಮರ್ಥ ರಾಮದಾಸ ಸ್ವಾಮೀ
ಆಧಾರ
: ಸನಾತನ ನಿರ್ಮಿತ ಕಿರುಗ್ರಂಥ "ಆರತಿಸಂಗ್ರಹ".

(ಶಂ ಕರೋತಿ| ಶಂ ಅಂದರೆ ಕಲ್ಯಾಣ. ಕಲ್ಯಾಣ ಮಾಡುವವನು ಶಂಕರ, ಹೀಗೆ ಈ ಶಬ್ದದ ಅರ್ಥ ಮತ್ತು ಉತ್ಪತ್ತಿಯಾಗಿದೆ.)

ಶಬ್ದಾರ್ಥ: ಶಂಕರನ ಕುತ್ತಿಗೆಯಲ್ಲಿ (ಕಂಪಿಸುವ), ವಿಕ್ರಾಳಾ (ಅತ್ಯಂತ ಪ್ರಚಂಡವಾಗಿರುವ) ಬ್ರಹ್ಮಾಂಡದ ಮಾಲೆಯಿದೆ (ಅಂದರೆ ಅವನು ಬ್ರಹ್ಮಾಂಡಕ್ಕಿಂತಲೂ ವ್ಯಾಪಕನಾಗಿದ್ದಾನೆ)| ಅವನ ಕಂಠವು ವಿಷಪ್ರಾಶನ ಮಾಡಿದ್ದರಿಂದ ಕಪ್ಪಾಗಿದೆ, (ಶಂಕರನಿಗೆ ಸಿಟ್ಟು ಬಂದರೆ ಅವನು ಮೂರನೇ ಕಣ್ಣನ್ನು ತೆರೆಯುತ್ತಾನೆ ಮತ್ತು) ಅವನ ತ್ರಿನೇತ್ರದಿಂದ (ಮೂರನೇ ಕಣ್ಣಿನಿಂದ) ಜ್ವಾಲೆಗಳು ಹೊರಬೀಳುತ್ತವೆ. (ಅದರಿಂದ ಎದುರಿನ ವ್ಯಕ್ತಿಯು ಏನೂ ಉಳಿಯದಂತೆ ಭಸ್ಮವಾಗಿಬಿಡುತ್ತಾನೆ)| (ಶಂಕರನ) ಲಾವಣ್ಯ (ರೂಪ) ಅತ್ಯಂತ ಸುಂದರವಾಗಿದೆ| ಅವನ ತಲೆಯಮೇಲೆ ಬಾಲಾ (ಗಂಗಾ) ವಿದೆ. (ಭಗೀರಥನು ತಪಶ್ಚರ್ಯವನ್ನು ಮಾಡಿದ ನಂತರ ಸ್ವರ್ಗದಿಂದ ಅವತರಿಸಿದ ಗಂಗೆಯ ಪ್ರವಾಹವು ಪೃಥ್ವಿಗೆ ಸಹನೆಯಾಗುವುದಿಲ್ಲ ಮತ್ತು ಆ ಪ್ರವಾಹವು ನೇರವಾಗಿ ಪಾತಾಳದಲ್ಲಿ ಪ್ರವೇಶಿಸಬಹುದು; ಎಂದು ಶಂಕರನು ಗಂಗೆಯನ್ನು ತನ್ನ ಜಟೆಯಲ್ಲಿ ಧರಿಸಿ ಅವಳ ವೇಗವನ್ನು ಕಡಿಮೆ ಮಾಡಿದನು.)| ಅಲ್ಲಿಂದ ಅವಳ ನಿರ್ಮಲವಾದ ಜಲವು ಝುಳುಝುಳು ಹರಿಯುತ್ತಿದೆ.||೧||

ಭಾವಾರ್ಥ: ಲವಥವತೀ ವಿಕ್ರಾಳಾ ಬ್ರಹ್ಮಾಂಡೀ ಮಾಳಾ (ಸಮುದ್ರಮಂಥನದಿಂದ ಹೊರಬಂದ ಭಯಂಕರವಾದ ಹಾಲಾಹಲ ವಿಷದ ಭಯದಿಂದ ಅತೀ ಪ್ರಚಂಡವಾದಂತಹ ಬ್ರಹ್ಮಾಂಡದ ಮಾಲೆಯು ಕಂಪಿಸಲಾರಂಭಿಸಿತು, ನಡುಗಲಾರಂಭಿಸಿತು)| ವಿಷೇ ಕಂಠ ಕಾಳಾ (ಆಗ ಶಂಕರನು ಆ ವಿಷವನ್ನು ಪ್ರಾಶನ ಮಾಡಿದನು. ಆ ಭಯಂಕರ ವಿಷದಿಂದಾಗಿ ಅವನ ಕಂಠವು ಕಪ್ಪಾಯಿತು.) ತ್ರಿನೇತ್ರೀ ಜ್ವಾಳಾ (ಆ ವಿಷದಿಂದಾಗಿ ಅವನ ಮೂರೂ ನೇತ್ರಗಳಿಂದ ಅಗ್ನಿಯ ಜ್ವಾಲೆಗಳು ಹೊರಬೀಳಲಾರಂಭಿಸಿದವು.)| ಲಾವಣ್ಯಸುಂದರ ಮಸ್ತಕೀ ಬಾಳಾ (ಆ ದಾಹದಿಂದ ಮುಕ್ತಗೊಳ್ಳುವುದಕ್ಕಾಗಿ ಅವನು ತನ್ನ ತಲೆಯ ಜಟೆಯಲ್ಲಿ ಅತ್ಯಂತ ಸುಂದರ ರೂಪವನ್ನು ಹೊಂದಿರುವ ಬಾಲಾ (ಗಂಗಾ) ಧಾರಣೆ ಮಾಡಿದನು)| ಅಲ್ಲಿಂದ ಅವಳ ನಿರ್ಮಲವಾದ ಜಲ ಝುಳಝುಳನೆ ಹರಿಯುತ್ತಿದೆ.||೧||

ಹೇ ಶ್ರೀ ಶಂಕರಾ, ನಿನಗೆ ಜಯಜಯಕಾರ! ಹೇ ಕರ್ಪೂರಗೌರಾ (ಕರ್ಪೂರದಂತೆ ಶುಭ್ರವರ್ಣವಾಗಿರುವ), (ನಾವು ಸಂಪೂರ್ಣ ಶ್ರದ್ಧೆಯಿಂದ, ಮನೋಭಾವದಿಂದ) ನಿನ್ನ ಆರತಿ ಮಾಡುತ್ತೇನೆ||….||

ಕರ್ಪೂರಗೌರ ಶಂಕರನು ಅತ್ಯಂತ ಮುಗ್ಧನಾಗಿದ್ದಾನೆ. (ಅವನು ಭಕ್ತರಿಗೆ ಕೂಡಲೇ ಪ್ರಸನ್ನನಾಗುತ್ತಾನೆ. ಶಂಕರನು ಪ್ರಸನ್ನಗೊಂಡು ಅನೇಕ ಅಸುರರಿಗೆ ವರ ನೀಡಿದ ಕಥೆಗಳನ್ನು ಪುರಾಣಗಳಲ್ಲಿ ನೀಡಲಾಗಿದೆ.) ಅವನ ನೇತ್ರಗಳು ವಿಶಾಲವಾಗಿವೆ| ದೇವೀ ಪಾರ್ವತಿಯು ಅವನ ಅರ್ಧಾಂಗಿ ಅಂದರೆ ಪತ್ನಿಯಾಗಿದ್ದಾಳೆ. ಅವನು ಕುತ್ತಿಗೆಯಲ್ಲಿ ಹೂವಿನ ಮಾಲೆಯನ್ನು ಹಾಕಿದಾನೆ| ಅವನು ಸರ್ವಾಂಗಗಳಲ್ಲಿ ವಿಭೂತಿಯನ್ನು ಹಚ್ಚಿದ್ದಾನೆ. (ಸರ್ವಾಂಗಗಳಲ್ಲಿ ಭಸ್ಮವನ್ನು ಹಚ್ಚಿದ್ದಾನೆ.) ಅವನು ಶಿತಿಕಂಠ (ನವಿಲಿನ ಕಂಠದಂತೆ ನೀಲಿಯಾದ ಕಂಠವಿರುವವನು) ನಾಗಿದ್ದಾನೆ| ಇಂತಹ (ಉಮೆಗೆ ಅತ್ಯಂತ ಪ್ರಿಯನಾಗಿರುವ) ಶಂಕರ ಅವಳೊಂದಿಗೆ ಶೋಭಿಸುತ್ತಾನೆ||೨||

ದೇವರು ಮತ್ತು ದೈತ್ಯರು ಸಾಗರ ಮಂಥನ ಮಾಡುತ್ತಿರುವಾಗ ಅದರಿಂದ ಆಕಸ್ಮಿಕವಾಗಿ ಹಾಲಾಹಲವೆಂಬ ಹೆಸರಿನ ಭಯಂಕರ ವಿಷವು ಹೊರಬಿತ್ತು| (ಅದನ್ನು ಧಾರಣೆ ಮಾಡಲು ಯಾರೂ ತಯಾರಿರಲಿಲ್ಲ.) ಇಂತಹ ಸಂದರ್ಭದಲ್ಲಿ (ಹೇ ಶಂಕರಾ,) ನೀನು ಅಸುರನಾಗಿ (ನಿರ್ಭಯನಾಗಿ) ಅದನ್ನು ಪ್ರಾಶನ ಮಾಡಿರುವಿ (ಮತ್ತು ಸೃಷ್ಟಿಯ ಮೇಲೆನ ಸಂಕಟವನ್ನು ತಡೆಗಟ್ಟಿರುವಿ.)| (ಅದರಿಂದಾಗಿ ನಿನ್ನ ಕಂಠವು ನೀಲಿಯಾಗಿದ್ದರಿಂದ) ನಿನಗೆ ನೀಲಕಂಠ ಎಂಬ ಹೆಸರಿನಿಂದ ಪ್ರಸಿದ್ಧಿ ದೊರೆಯಿತು (ನೀನು ಈ ಹೆಸರಿನಿಂದ ಗುರುತಿಸಲ್ಪಡುತ್ತಿರುವಿ.)||೩||

ಶಂಕರ ವ್ಯಾಘ್ರಾಂಬರವನ್ನು (ಹುಲಿಯ ಚರ್ಮದ ವಸ್ತ್ರ) ಧರಿಸುವವನಾಗಿದ್ದಾನೆ; ಅವನು ಫಣಿವರಧರ (ಶರೀರದ ಮೇಲೆ ನಾಗವನ್ನು ಧರಿಸಿರುವ), ರೂಪದಲ್ಲಿ ಸುಂದರ, ಮದನಾರೀ (ಮನ್ಮಥನ ಶತ್ರು, ನಾಶಗೊಳಿಸುವವನು) ಆಗಿದ್ದಾನೆ. (ಸಮಾಧಿಯನ್ನು ಭಂಗಗೊಳಿಸಿದಕ್ಕಾಗಿ ಅವನು ಮೂರನೇ ಕಣ್ಣನ್ನು ತೆರೆದು ಮನ್ಮಥನನ್ನು ನಾಶಗೊಳಿಸಿದನು.)| ಅವನು ಪಂಚಾನನ (ಸದ್ಯೋಜಾತ, ವಾಮದೇವ, ಅಘೋರ, ತತ್ಪುರುಷ ಮತ್ತು ಈಶಾನ ಎಂಬ ಐದು ಮುಖಗಳನ್ನು ಹೊಂದಿರುವ), ಮನಮೋಹಕ ರೂಪವನ್ನು ಹೊಂದಿರುವ ಮುನಿಜನರಿಗೆ (ಪರಮಭಕ್ತರಿಗೆ) ಪರಮಸುಖದ (ಆತ್ಮಾನಂದದ) ಲಾಭ ಮಾಡಿಕೊಡಿಕೊಡುವವನಾಗಿದ್ದಾನೆ| (ಇಂತಹ ಶಂಕರನು) ನೂರು ಕೋಟಿ ಜಪಸಂಖ್ಯೆಯಷ್ಟು ಫಲವನ್ನು ನೀಡುವ ಶ್ರೀರಾಮನಾಮರೂಪಿ ಬೀಜಮಂತ್ರದಿಂದ (ರಾಮನಾಮದ) ಉಚ್ಚಾರಣೆಯನ್ನು (ಜಪ) ಅಖಂಡವಾಗಿ ಮಾಡುತ್ತಿರುತ್ತಾನೆ| ರಘುಕುಲತಿಲಕನಂತಹ (ಭೂಷಣ) ನಾಗಿರುವ ಶ್ರೀರಾಮ ದಾಸನ (ರಾಮದಾಸಸ್ವಾಮಿಯ) ಆಂತರ್ಯದಲ್ಲಿ ವಿರಾಜಮಾನನಾಗಿದ್ದಾನೆ||೪||