ಹನುಮಾನ ಜಯಂತಿ

ಮಿತ್ರರೇ, ಇಂದು ನಾವು ದೂರದರ್ಶನದಲ್ಲಿ ಅನೇಕ ದಾರಾವಾಹಿಗಳನ್ನು ನೋಡುತ್ತೇವೆ. ಅವುಗಳಲ್ಲಿ ಸೂಪರಮ್ಯಾನ್ ನಂತಹ ಕಾಲ್ಪನಿಕ ಪಾತ್ರವನ್ನು ತೋರಿಸಲಾಗುತ್ತದೆ. ಅದನ್ನು ನೋಡಿ ನಮಗೂ ನಾವು ಸೂಪರಮ್ಯಾನ್ ಆಗಬೇಕು ಎಂದು ಅನಿಸುತ್ತದೆ. ಅನೇಕ ಮಕ್ಕಳು ಇಂತಹ ಪಾತ್ರಗಳನ್ನು ನಿಜವೆಂದು ನಂಬಿ ಅವುಗಳಂತೆ ವರ್ತಿಸಲು ಆರಂಭಿಸುತ್ತಾರೆ; ಆದರೆ ಇವೆಲ್ಲವೂ ಸುಳ್ಳು ಹಾಗೂ ಕಾಲ್ಪನಿಕವಾಗಿವೆ. ಇದರ ಬದಲಾಗಿ ನಮ್ಮ ದೇವತೆಗಳು ಬಹಳ ಶಕ್ತಿವಂತ ಹಾಗೂ ಸಾಮರ್ಥ್ಯವಂತರಿದ್ದಾರೆ. ಆಂಜನೇಯನು ಬಹಳ ಶಕ್ತಿವಂತನಾಗಿದ್ದನು. ಅವನು ಕೇವಲ ಒಂದೇ ಕೈಯಲ್ಲಿ ದ್ರೋಣಗಿರಿ ಪರ್ವತವನ್ನು ಎತ್ತಿದನು, ಅಂತೆಯೇ ಸಮುದ್ರದ ಮೇಲೆ ಹಾರಿಹೋಗಿ ಲಂಕೆಯನ್ನು ಪ್ರವೇಶಿಸಿದನು. ಮಿತ್ರರೇ, ನಿಮಗೆ ಇಂತಹ ಸರ್ವಶಕ್ತಿಮಾನನಾದ ಆಂಜನೇಯನಂತೆ ಆಗಬೇಕೆಂದು ಅನಿಸುತ್ತದೆಯೋ ಅಥವಾ ಸುಳ್ಳು ಪಾತ್ರಗಳಾಗಿರುವ ಸೂಪರಮ್ಯಾನ್ ಹಾಗೂ ಸ್ಪೈಡರ್ ಮ್ಯಾನನಂತೆ ಆಗಬೇಕು ಎಂದು ಅನಿಸುತ್ತದೆ ?

ನಿಮ್ಮ ಮನಸ್ಸಿನಲ್ಲಿ ಹನುಮಂತನು ಇಷ್ಟೊಂದು ಶಕ್ತಿಶಾಲಿ ಹೇಗೆ ಎಂಬ ಪ್ರಶ್ನೆ ಇರಬಹುದು. ಈ ಪ್ರಶ್ನೆಗೆ ಉತ್ತರ ಇರುವುದು ಹನುಮಂತನ ಶ್ರೀರಾಮ ಭಕ್ತಿಯಲ್ಲಿ. ಭಕ್ತಿಯಲ್ಲಿ ಶಕ್ತಿಯಿದೆ. ಭಕ್ತಿ ಮಾಡಿದರೆ ನಾವೂ ಹನುಮಂತನಂತೆ ಶಕ್ತಿಶಾಲಿಗಳಾಗುತ್ತೇವೆ. ವಿದ್ಯಾರ್ಥಿ ಮಿತ್ರರೇ, ನಿಮಗೂ ಸರ್ವಶಕ್ತಿಮಾನ ಹಾಗೂ ಮಹಾಪರಾಕ್ರಮಿ ಆಗಬೇಕೆಂದು ಅನಿಸುತ್ತಿದೆಯಲ್ಲವೇ? ನಾವೂ ಆಂಜನೇಯನ ಆದರ್ಶವನ್ನಿಟ್ಟು ರಾಷ್ಟ್ರ ಹಾಗೂ ಧರ್ಮರಕ್ಷಣೆಗಾಗಿ ಸಿದ್ಧರಾಗೋಣ. ಇಂದು ಹನುಮಾನ ಜಯಂತಿಯ ನಿಮಿತ್ತ ಸರ್ವಶಕ್ತಿಶಾಲಿಯಾದ ಹನುಮಂತನ ಜನ್ಮದ ಬಗ್ಗೆ ಹಾಗೂ ಇತರ ಮಾಹಿತಿಯನ್ನು ಪಡೆದುಕೊಳ್ಳೋಣ, ಅಂತೆಯೇ ಅವನ ಯಾವ ಗುಣಗಳಿಂದ ಶ್ರೀರಾಮನು ಅವನನ್ನು ಇಷ್ಟಪಡುತ್ತಾನೆ ಹಾಗೂ ಅವನು ಹೇಗೆ ಪರಮಭಕ್ತನಾದನು ಎಂಬುದನ್ನೂ ನೋಡೋಣ.

ಹನುಮಂತನ ಜನ್ಮದ ಇತಿಹಾಸ

ದಶರಥ ರಾಜನು ಪುತ್ರಪ್ರಾಪ್ತಿಗಾಗಿ ಒಂದು ಯಜ್ಞ ಮಾಡಿದನು. ಆ ಯಜ್ಞದಿಂದ ಅಗ್ನಿದೇವನು ಪ್ರಸನ್ನನಾಗಿ ದಶರಥನ ರಾಣಿಯರಿಗಾಗಿ ಪಾಯಸದ ಪ್ರಸಾದವನ್ನು ನೀಡಿದನು. ದಶರಥರಾಜನ ರಾಣಿಯರಂತೆ ತಪಸ್ಸು ಮಾಡುತ್ತಿದ್ದ ಅಂಜನಿಗೆ ಅಂದರೆ ಆಂಜನೇಯನ ತಾಯಿಗೂ ಈ ಪ್ರಸಾದ ದೊರೆಯಿತು. ಆದುದರಿಂದ ಅಂಜನಿಗೆ ಚೈತ್ರ ಪೂರ್ಣಿಮೆಯಂದು ಪುತ್ರನು ಲಭಿಸಿದನು. ಅಂದಿನಿಂದ ಆ ದಿನವನ್ನು ಹನುಮಾನ ಜಯಂತಿ ಎಂದು ಆಚರಿಸಲಾಗುತ್ತದೆ. ಆಂಜನೇಯನು ಜನಿಸುತ್ತಲೇ ಉದಯಿಸುತ್ತಿರುವ ಸೂರ್ಯನನ್ನು ಕಂಡನು ಹಾಗೂ ಅದು ಒಂದು ಹಣ್ಣುಇರಬೇಕೆಂದು ಎಂದು ಸೂರ್ಯನ ದಿಕ್ಕಿನಲ್ಲಿ ಹಾರಿದನು. ಆಗ ಸೂರ್ಯನನ್ನು ನುಂಗಲು ರಾಹುವು ಬಂದಿದ್ದನು. ಇಂದ್ರದೇವನಿಗೆ ಆಂಜನೇಯನು ರಾಹುವೇ ಇರಬೇಕು ಎಂದು ಅನಿಸಿತು ಹಾಗೂ ಅವನು ಆಂಜನೇಯನ ದಿಕ್ಕಿನಲ್ಲಿ ವಜ್ರ (ಇಂದ್ರನ ಆಯುಧ) ಎಸೆದನು. ಅದು ಆಂಜನೇಯನ ಗದ್ದಕ್ಕೆ ತಗುಲಿತು, ಇದರಿಂದ ಅವನ ಗದ್ದವು ಕತ್ತರಿಸಲ್ಪಟ್ಟಿತು. ಅಂದಿನಿಂದ ಅವನಿಗೆ 'ಹನುಮಾನ' ಎಂಬ ಹೆಸರು ಬಂತು.

ಹನುಮಂತನ ಕಾರ್ಯ ಹಾಗೂ ವೈಶಿಷ್ಟ್ಯಗಳು

ಅ. ಮಹಾಪರಾಕ್ರಮಿ : ಹನುಮಂತನು ಜಂಬು, ಮಾಲಿ, ಅಕ್ಷ, ಧೂಮ್ರಾಕ್ಷ, ನಿಕುಂಭರಂತಹ ದೊಡ್ಡದೊಡ್ಡ ವೀರರನ್ನು ನಾಶಗೊಳಿಸಿದನು. ಅವನು ರಾವಣನ ಪ್ರಜ್ಞೆ ತಪ್ಪಿಸಿದ್ದನು. ಸಮುದ್ರದ ಮೇಲೆ ಹಾರಿ ಹೋಗಿ ಲಂಕಾದಹನ ಮಾಡಿದನು ಹಾಗೂ ದ್ರೋಣಗಿರಿ ಪರ್ವತವನ್ನೂ ಎತ್ತಿ ತಂದನು. ಮಿತ್ರರೇ, ಈ ಎಲ್ಲ ಪ್ರಸಂಗಗಳಿಂದ ಆಂಜನೇಯನು ಎಷ್ಟು ಪರಾಕ್ರಮಿಯಾಗಿದ್ದನು ಎಂಬುದು ನಿಮ್ಮ ಗಮನಕ್ಕೆ ಬಂದಿರಬಹುದು.

ಆ. ನಿಸ್ಸೀಮ ಭಕ್ತ : ಮಿತ್ರರೇ, ಆಂಜನೇಯನು ಕೇವಲ ಪರಾಕ್ರಮಿಯಾಗಿರದೇ ಶ್ರೀರಾಮನ ಭಕ್ತನೂ ಆಗಿದ್ದನು. ಅವನು ಶ್ರೀರಾಮನಿಗಾಗಿ ಪ್ರಾಣ ಕೊಡಲೂ ಸಿದ್ಧನಿದ್ದನು. ಅವನು ಸತತವಾಗಿ ದೇವರ ನಾಮಸ್ಮರಣೆಯನ್ನು ಮಾಡುತ್ತಿದ್ದನು. ಅವನಿಗೆ ದೇವರ ನಾಮದಲ್ಲಿಯೇ ಶಕ್ತಿಯಿದೆ ಎಂಬುದು ತಿಳಿದಿತ್ತು. ನಾವೂ ಸತತವಾಗಿ ದೇವರ ನಾಮಸ್ಮರಣೆಯನ್ನು ಮಾಡಿ ದೇವರ ಶಕ್ತಿಯನ್ನು ಪಡೆಯೋಣವೆ? ಆಂಜನೇಯನಿಗೆ ದೇವರ ಸೇವೆ ಮುಂದೆ ಎಲ್ಲವೂ ತುಚ್ಛವಾಗಿ ಕಾಣಿಸುತ್ತಿತ್ತು. ದೇವರಿಗೆ ಇಂತಹ ಭಕ್ತರೇ ಇಷ್ಟವಾಗುತ್ತಾರೆ. ನಾವೂ ಆಂಜನೇಯನಂತಹ ಭಕ್ತರಾಗಲು ಪ್ರಯತ್ನಿಸಬೇಕು.

ಇ. ಅಖಂಡ ಸಾಧನೆ : ಯುದ್ಧವು ನಡೆಯುತ್ತಿರುವಾಗ ಆಂಜನೇಯನು ಸ್ವಲ್ಪ ಸಮಯ ಹೊರಬಂದು ಧ್ಯಾನ ಮಾಡುತ್ತಿದ್ದನು ಹಾಗೂ ಪ್ರತಿಯೊಂದು ಕ್ಷಣವೂ ದೇವರ ಸ್ಮರಣೆಯನ್ನು ಮಾಡುತ್ತಿದ್ದನು.

ಈ. ಬುದ್ಧಿವಂತ : ಆಂಜನೇಯನಿಗೆ ವ್ಯಾಕರಣದ ಎಲ್ಲ ಸೂತ್ರಗಳೂ ತಿಳಿದಿದ್ದವು. ಅವನನ್ನು ೧೧ ನೇವ್ಯಾಕರಣಕಾರನೆಂದು ತಿಳಿಯಲಾಗುತ್ತದೆ. ಅವನು ಹೇಗೆ ಇಷ್ಟೊಂದು ಬುದ್ಧಿವಂತನಿದ್ದನು? ಮಿತ್ರರೇ, ಯಾರು ಭಕ್ತಿ ಮಾಡುತ್ತಾರೆಯೋ ಅವರ ಬುದ್ಧಿಯು ಸಾತ್ತ್ವಿಕವಿರುತ್ತದೆ. ಇಂದಿನಿಂದ ನಾವೂ ಆಂಜನೇಯನಂತೆ ಭಕ್ತಿ ಮಾಡಿ ಬುದ್ಧಿವಂತರಾಗೋಣ !

ಉ. ಜಿತೇಂದ್ರಿಯ : ಮಾರುತಿಗೆ ತನ್ನ ಇಂದ್ರಿಯಗಳ ಮೇಲೆ ನಿಯಂತ್ರಣವಿತ್ತು. ಅವನು ಸೀತೆಯನ್ನು ಹುಡುಕಲು ಲಂಕೆಗೆ ಹೋದನು. ಅಲ್ಲಿ ಅವನು ರಾಕ್ಷಸ ಕುಲದ ಅನೇಕ ಸ್ತ್ರೀಯರನ್ನು ನೋಡಿದನು; ಆದರೆ ಅವನ ಮನಸ್ಸಿನಲ್ಲಿ ಒಂದು ಸ್ತ್ರೀಯ ಬಗ್ಗೆ ಒಂದು ಕ್ಷಣಕ್ಕೂ ಯಾವುದೇ ವಿಚಾರ ಬರಲಿಲ್ಲ; ಏಕೆಂದರೆ ಅವನು ತನ್ನ ಎಲ್ಲ ವಿಕಾರಗಳ (ಷಡ್ರಿಪುಗಳ) ಮೇಲೆ ನಿಯಂತ್ರಣವನ್ನು ಪಡೆದಿದ್ದನು. ಮಿತ್ರರೇ, ದೇವರ ಭಕ್ತಿ ಮಾಡುವ ನಿಜವಾದ ಭಕ್ತನೇ ತನ್ನ ವಿಕಾರಗಳ, ಅಂದರೆ ಷಡ್ರಿಪುಗಳ ಮೇಲೆ ನಿಯಂತ್ರಣವನ್ನು ಪಡೆಯಬಹುದು.ಅವನು ವಿಕಾರಗಳ ಆಹಾರವಾಗುವುದಿಲ್ಲ. ಇಂದು ನಾವು ಬಹಳ ಕಲಿಯುತ್ತೇವೆ ಆದರೆ ನಮ್ಮ ವ್ಯಕ್ತಿತ್ವ ವಿಕಸನವಾಗುವುದಿಲ್ಲ. ನಾವು ದೈವಭಕ್ತರಲ್ಲದಿರುವುದೇ ಇದರ ಕಾರಣವಾಗಿದೆ.

ಊ. ಉತ್ತಮ ವಾಗ್ಮಿ : ಆಂಜನೇಯನು ಉತ್ತಮ ವಾಗ್ಮಿಯಾಗಿದ್ದನು. ಅವನು ರಾವಣನ ಆಸ್ಥಾನದಲ್ಲಿ ಭಾಷಣ ಮಾಡಿದಾಗ ಸಂಪೂರ್ಣ ಆಸ್ಥಾನವು ದಂಗಾಯಿತು.

ಮಿತ್ರರೇ, ಮೇಲಿನ ಎಲ್ಲ ಗುಣಗಳು ನಮ್ಮಲ್ಲಿ ಬರಲು ನಾವು ಹನುಮಂತನಿಗೆ ಪ್ರಾರ್ಥಿಸೋಣ – ಹೇ ಆಂಜನೇಯಾ, ನಮಗೆ ನಿನ್ನಂತೆ ಭಕ್ತಿ ಮಾಡುವ ಶಕ್ತಿ ಹಾಗೂ ಬುದ್ಧಿಯನ್ನು ಪ್ರದಾನಿಸು. ನಿನ್ನ ಎಲ್ಲ ಗುಣಗಳೂ ನಮ್ಮಲ್ಲಿ ಬರಲು ನಮ್ಮಿಂದ ಪ್ರಯತ್ನ ಮಾಡಿಸಿಕೊ, ಇದೇ ನಿನ್ನ ಚರಣಗಳಲ್ಲಿ ಪ್ರಾರ್ಥನೆ.

ಆಂಜನೇಯನ ಮೂರ್ತಿಯು ಸಿಂಧೂರದ ಬಣ್ಣದಲ್ಲಿರುವಕಾರಣ

ಅ. ಪ್ರಭು ಶ್ರೀ ರಾಮಚಂದ್ರನ ಮೇಲಿನ ನಿಸ್ಸೀಮ ಭಕ್ತಿಯನ್ನು ತೋರಿಸುವ ಪ್ರಸಂಗ: ಆಂಜನೇಯನ ಬಣ್ಣವು ಸಿಂಧೂರದ ಬಣ್ಣವಿರಲು ಕಾರಣವಿದೆ. ಒಮ್ಮೆ ಸೀತೆಯು ಸ್ನಾನದ ನಂತರ ಹಣೆಗೆ ಸಿಂಧೂರವನ್ನು ಹಚ್ಚಿದಳು. ಆಗ ಹನುಮಂತನು ಇದರ ಕಾರಣವನ್ನು ಕೇಳಿದನು. ಆಗ ಸೀತೆಯು ’ರಾಮನ ಆಯುಶ್ಯವು ಹೆಚ್ಚಲಿ ಎಂದು ಸಿಂಧೂರವನ್ನು ಹಚ್ಚುತ್ತೇನೆ’ ಎಂದು ಹೇಳಿದಳು. ಮಿತ್ರರೇ, ಆಂಜನೇಯನು ರಾಮನ ನಿಸ್ಸೀಮ ಭಕ್ತನಾಗಿದ್ದನು. ಅವನು ’ನನ್ನ ಸ್ವಾಮಿಯ ಆಯುಷ್ಯವು ಇದರಿಂದ ಹೆಚ್ಚುವುದಾದರೆ ನಾನು ಸಂಪೂರ್ಣ ಶರೀರದ ಮೇಲೆ ಸಿಂಧೂರವನ್ನು ಹಚ್ಚುತ್ತೇನೆ’ ಎಂದು ಹೇಳಿ ಸಂಪೂರ್ಣ ಶರೀರದ ಮೇಲೆ ಸಿಂಧೂರವನ್ನು ಹಚ್ಚಿದನು. ಇದರ ಬಗ್ಗೆ ಪ್ರಭು ಶ್ರೀರಾಮಚಂದ್ರನಿಗೆ ತಿಳಿದಾಗ ಅವನು ಪ್ರಸನ್ನನಾಗಿ ’ಆಂಜನೇಯಾ, ನಿನ್ನಂತಹ ಭಕ್ತ ನನಗೆ ಬೇರೊಬ್ಬನಿಲ್ಲ’ ಎಂದು ಹೇಳಿದನು. ಅಂದಿನಿಂದ ಆಂಜನೇಯನ ಬಣ್ಣವು ಸಿಂಧೂರದ್ದಾಗಿದೆ.

ಆ. ಮಾರುತಿಗೆ ಸಿಂಧೂರ ಹಚ್ಚುವುದು ಹಾಗೂ ಎಣ್ಣೆ ಅರ್ಪಿಸುವುದು : ಹನುಮಂತನು ದ್ರೋಣಗಿರಿ ಪರ್ವತವನ್ನು ತರುವಾಗ ಭರತನು ಅವನನ್ನು ರಾಕ್ಷಸನೆಂದು ತಪ್ಪಾಗಿ ತಿಳಿದು ಬಾಣ ಹೊಡೆದನು. ಇದರಿಂದ ಹುನುಮಂತನ ಕಾಲಿಗೆ ಪೆಟ್ಟಾಯಿತು ಹಾಗೂಇದರನೋವು ಸಿಂಧೂರ ಹಾಗೂ ಎಣ್ಣೆ ಹಚ್ಚಿದ್ದರಿಂದ ಕಡಿಮೆಯಾಯಿತು. ಆದುದರಿಂದ ಹನುಮಂತನಿಗೆ ಸಿಂಧೂರ ಹಚ್ಚುತ್ತಾರೆ ಹಾಗೂ ಎಣ್ಣೆಯನ್ನು ಅರ್ಪಿಸುತ್ತಾರೆ.

ಆಂಜನೇಯನ ರೂಪ

ಅ. ಪ್ರತಾಪ ಮಾರುತಿ : ಒಂದು ಕೈಯಲ್ಲಿ ದ್ರೋಣಗಿರಿ ಪರ್ವತ ಹಾಗೂ ಇನ್ನೊಂದು ಕೈಯಲ್ಲಿ ಗದೆಯನ್ನು ಹಿಡಿದಿರುವ ರೂಪವಿರುತ್ತದೆ. ಇದುಆಂಜನೇಯನ ಶಕ್ತಿಯನ್ನು ದರ್ಶಿಸುತ್ತದೆ.

ಆ. ದಾಸಮಾರುತಿ : ಶ್ರೀರಾಮನ ಎದುರು ಕೈಮುಗಿದು ನಿಂತಿರುವ, ತಲೆಬಾಗಿರುವ ಹಾಗೂ ನೆಲದ ಮೇಲೆ ಬಾಲವನ್ನು ಇಟ್ಟಿರುವ ರೂಪವಿರುತ್ತದೆ. ಇದರಿಂದ ಆಂಜನೇಯನಲ್ಲಿಎಷ್ಟು ವಿನಮ್ರತೆ ಇದೆ ಎಂಬುದನ್ನು ಕಲಿಯಬಹುದು.

ಇ. ವೀರಮಾರುತಿ :ಯಾವಾಗಲೂ ಹೋರಾಡುವ ಸ್ಥಿತಿಯಲ್ಲಿ ನಿಂತಿರುತ್ತಾನೆ. ನಾವೂ ಇವನಂತೆ ಅನ್ಯಾಯದ ವಿರುದ್ಧ ಹೋರಾಡಬೇಕು. ನಾವು ಹನುಮಾನ ಜಯಂತಿಯ ಪ್ರಯುಕ್ತ ಆಂಜನೇಯನಂತೆ ಅನ್ಯಾಯದ ವಿರುದ್ಧಹೋರಾಡಲುನಿಶ್ಚಯಿಸೋಣ.

ಈ. ಪಂಚಮುಖಿ ಮಾರುತಿ : ನಾವು ಬಹಳಷ್ಟು ಕಡೆಗಳಲ್ಲಿ ಪಂಚಮುಖಿ ಮಾರುತಿಯನ್ನು ನೋಡುತ್ತೇವೆ. ಈ ಮೂರ್ತಿಯಲ್ಲಿ ಗರುಢ, ವರಾಹ, ಹಯಗ್ರೀವ, ಸಿಂಹ ಹಾಗೂ ಕಪಿಯ ಮುಖಗಳಿರುತ್ತದೆ. ಪಂಚಮುಖಿ ಎಂದರೆ ಐದು ದಿಕ್ಕುಗಳ ರಕ್ಷಕ. ಆಂಜನೇಯನು ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ಹಾಗೂ ಊರ್ಧ್ವ ಈ ಐದು ದಿಕ್ಕುಗಳನ್ನು ರಕ್ಷಿಸುತ್ತಾನೆ.

ಪೂಜಾವಿಧಿ

ಆಂಜನೇಯನ ಪೂಜೆಯಲ್ಲಿ ಸಿಂಧೂರ, ಎಣ್ಣೆ ಹಾಗೂ ಎಕ್ಕದಎಲೆಯನ್ನು ಉಪಯೋಗಿಸುತ್ತಾರೆ; ಏಕೆಂದರೆ ಈ ವಸ್ತುಗಳಲ್ಲಿ ದೇವತೆಗಳ ಚೈತನ್ಯವನ್ನು ಆಕರ್ಷಿಸುವ ಕ್ಷಮತೆಯು ಅಧಿಕವಾಗಿದೆ.

ಪೂಜೆಯ ಕೃತಿ

ಅ. ಮಾರುತಿಗೆ ಅನಾಮಿಕಾದಿಂದ (ಉಂಗುರ ಬೆರಳು) ಸಿಂಧೂರವನ್ನು ಹಚ್ಚಬೇಕು.

ಆ. ಐದರ ಪಟ್ಟಿನಂತೆ ಎಕ್ಕದಎಲೆ ಹಾಗೂ ಹೂವುಗಳನ್ನು ಅರ್ಪಿಸಬೇಕು.

ಇ. ಮಾರುತಿಗೆ ಕೇದಗೆ, ಚಮೇಲಿ ಅಥವಾ ಅಂಬರದ ೨ ಊದುಬತ್ತಿಗಳಿಂದ ಧೂಪ ತೋರಿಸಬೇಕು.

ಈ. ಐದು ಅಥವಾ ಐದರ ಪಟ್ಟಿನಲ್ಲಿ ಪ್ರದಕ್ಷಿಣೆಗಳನ್ನು ಹಾಕಬೇಕು.

ಉ. ಸಮರ್ಥ ರಾಮದಾಸ ಸ್ವಾಮಿಗಳು ೧೩ ಕೋಟಿ ರಾಮನಾಮವನ್ನು ಜಪಿಸಿದಾಗ ಅವರ ಎದುರು ಆಂಜನೇಯನು ಪ್ರತ್ಯಕ್ಷನಾದನು ಹಾಗೂ ’ಮಾರುತಿ ಸ್ತೋತ್ರವನ್ನು ಭಕ್ತಿಪೂರ್ವಕವಾಗಿ ಪಠಿಸುವವರು ನಿರ್ಭಯಿಗಳಾಗುವರು’ ಎಂದು ಹೇಳಿದನು. ಆದುದರಿಂದ ನಾವೂ ಹನುಮಾನ ಜಯಂತಿಯ ನಿಮಿತ್ತ ಪ್ರತಿದಿನ ಮಾರುತಿಸ್ತ್ರೋತ್ರವನ್ನು ಪಠಿಸೋಣ.

ಹನುಮಂತನ ವಿಡಂಬನೆಯನ್ನು ತಡೆಯಿರಿ !

ಅ. ಹನುಮಂತನ ಚಿತ್ರವಿರುವ ರಟ್ಟನ್ನು (ಪ್ಯಾಡ್) ಉಪಯೋಗಿಸಬೇಡಿ ! : ಬಹಳಷ್ಟು ಮಕ್ಕಳು ಪರೀಕ್ಷೆಗೆ ಹೋಗುವಾಗ ಹನುಮಂತನ ಚಿತ್ರವಿರುವ ರಟ್ಟನ್ನು ಉಪಯೋಗಿಸುತ್ತಾರೆ. ನಾವು ಈ ಮೂಲಕ ದೇವರ ವಿಡಂಬನೆಯನ್ನು ಮಾಡುತ್ತೇವೆ. ಮಿತ್ರರೇ,ನಮ್ಮ ಆರಾಧ್ಯ ದೇವರಾದ ಹನುಮಂತನನ್ನು ಈ ರೀತಿಯಲ್ಲಿ ಅಪಮಾನ ಮಾಡುವುದೇ? ಹೀಗೆ ಮಾಡುವುದು ಪಾಪವಾಗಿರುವುದರಿಂದ ನಾವು ಅದನ್ನು ಮಾಡುವುದು ಬೇಡ ಹಾಗೂ ನಮ್ಮ ಮಿತ್ರರಿಗೂ ಹೀಗೆ ಮಾಡುವುದರಿಂದ ತಡೆಯೋಣ. ಇದರಿಂದ ನಮ್ಮ ಮೇಲೆ ಹನುಮಂತನ ಕೃಪೆಯಾಗುತ್ತದೆ.

ಆ. ಹನುಮಂತನ ಚಿತ್ರವಿರುವ ಟಿ-ಶರ್ಟ ಹಾಕುವುದನ್ನು ನಿಲ್ಲಿಸಿ ! : ಬಹಳಷ್ಟು ಮಕ್ಕಳು ಹನುಮಂತನ ಚಿತ್ರವಿರುವ ಶರ್ಟ ಧರಿಸುತ್ತಾರೆ. ಇದೂ ನಮ್ಮ ದೇವತೆಗಳ ವಿಡಂಬನೆಯೇ ಆಗಿದೆ. ನಾವು ಇದನ್ನು ತಡೆಯಬೇಕು. ಟಿ ಶರ್ಟ ತೊಳೆಯುವಾಗ ನಾವು ಅದನ್ನು ಹಿಂಡುತ್ತೇವೆ ಹಾಗೂ ಎಲ್ಲಿಯಾದರೂ ತೆಗೆದು ಇಡುತ್ತೇವೆ. ಇದರಿಂದ ದೇವತೆಯ ಅಪಮಾನವಾಗುತ್ತದೆ. ಹೀಗೆ ಮಾಡುವುದು ಪಾಪವಾಗಿದೆ ಎಂಬುದನ್ನು ಗಮನದಲ್ಲಿಡಿರಿ.

ಮಿತ್ರರೇ, ನಮ್ಮ ಆದರ್ಶ ಹಾಗೂ ಸರ್ವಶಕ್ತಿಮಾನನಾಗಿರುವ ದೇವತೆಯ ವಿಡಂಬನೆಯನ್ನು ನಾವು ಏಕೆ ಸಹಿಸಬೇಕು ? ಹಾಗಾದರೆ ಇಂದಿನಿಂದ ನಾವು ಹನುಮಂತನ ವಿಡಂಬನೆಯನ್ನು ತಡೆಯಲು ಪ್ರಯತ್ನಿಸೋಣ ಹಾಗೂ ಯಾರಾದರೂ ಮಾಡುತ್ತಿದ್ದರೆ ಅವರಿಗೂ ತಿಳಿಸಿ ಹೇಳೋಣ.

ಇಂದು ನಮಗೆ ಆಂಜನೇಯನ ಬಗ್ಗೆ ತಿಳಿಯಿತು, ಅದಕ್ಕಾಗಿ ನಾವು ಕೃತಜ್ಞತೆಯನ್ನು ಅರ್ಪಿಸೋಣ ಹಾಗೂ ಈ ಲೇಖನದಲ್ಲಿರುವ ಪ್ರತಿಯೊಂದು ಕೃತಿಯನ್ನು ಆಚರಣೆಗೆ ತರಲು ಆಂಜನೇಯನ ಬಳಿ ಶಕ್ತಿಯನ್ನು ಬೇಡಿಕೊಳ್ಳೋಣ.

ಶ್ರೀ. ರಾಜೇಂದ್ರ ಪಾವಸಕರ (ಗುರೂಜಿ), ಪನವೇಲ.